100Event_Arpana_21stDecember2019

ನಿರಂತರ : ನೂರರ ಸಂಭ್ರಮ

೨೦೦೭ರ ಬೇಸಿಗೆಯಲ್ಲಿ ಕಾಲೇಜು ಪದವಿ ಮುಗಿಸಿದ ನಾಲ್ಕು ಸ್ನೇಹಿತರು ತಮ್ಮ ಇಷ್ಟದೈವವಾದ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ರೈಲಿನಲ್ಲಿ ಬರುವಾಗ ನಡೆದ ಒಂದು ಮಾತುಕತೆ ನಿರಂತರ ಎಂಬ ಪುಟ್ಟ ಸಂಸ್ಥೆ ಹುಟ್ಟಲು ಕಾರಣವಾಯಿತು. ಅಂದು ನಡೆದ ಮಾತುಕತೆಯಿಂದ ಪ್ರೇರಿತರಾದ ಸ್ನೇಹಿತರು ತಾವು ದುಡಿಯಲು ಶುರು ಮಾಡಿದ ದಿನದಿಂದ ತಮ್ಮ ಸಂಬಳದಲ್ಲಿ ಸ್ವಲ್ಪ ಹಣವನ್ನು ತೆಗೆದಿಟ್ಟು ತಮಗೆ ಪರಿಚಯ ಇರುವ ಕಡೆಯಲ್ಲಿ ಜನರಿಗೆ ಬೇಕಾದ ಸಹಾಯವನ್ನು ಮಾಡಲು ಶುರು ಮಾಡಿದರು. ಎರಡು ವರ್ಷಗಳ ಕಾಲ ಹೀಗೆ ತಮ್ಮ ಇನ್ನಷ್ಟು ಸ್ನೇಹಿತರ ಜೊತೆಗೂಡಿ ಅನಾಥಾಶ್ರಮ, ವೃದ್ಧಾಶ್ರಮ, ಶಾಲೆಗಳು ಹೀಗೆ ಎಲ್ಲಿ ಸಾಧ್ಯವೋ ಅಲ್ಲೆಲ್ಲಾತಮ್ಮ ಸಹಾಯಹಸ್ತವನ್ನು ಚಾಚಿದರು. ೨೦೦೯ರಲ್ಲಿ ಈ ಸಂಸ್ಥೆಗೆ ಇನ್ನಷ್ಟು ಉತ್ತಮ ರೂಪವನ್ನು ಕೊಡಲು ನಿರ್ಧರಿಸಿ ತಮ್ಮ ಸಂಸ್ಥೆಯನ್ನು "ನಿರಂತರ ಫೌಂಡೇಶನ್" ಎಂದು ನೋಂದಾಯಿಸಿ ಅದಕ್ಕೆ ಒಂದು ಬ್ಯಾಂಕ್ ಅಕೌಂಟ್ ತೆರೆದು ಸಂಸ್ಥೆಯ ಎಲ್ಲಾ ಹಣದ ವಹಿವಾಟುಗಳು ಈ ಅಕೌಂಟಿನ ಮೂಲಕವೇ ನಡೆಯುವಂತೆ ಮಾಡಿ, ಅದರ ಎಲ್ಲಾ ವಿವರಗಳನ್ನು ಪ್ರತಿ ವರ್ಷ ತಪಾಸಣೆಗೆ ಒಳಪಡಿಸಿ ಎಲ್ಲಾ ರೀತಿಯ ಪಾರದರ್ಶಕತೆಯನ್ನು ತಂದರು. ಅಂದು ಪುಟ್ಟದಾಗಿ ಶುರುವಾದ ನಿರಂತರ ಸಂಸ್ಥೆ, ಈಗ ತನ್ನ ನೂರನೇ ಕಾರ್ಯಕ್ರಮದ ಆಯೋಜನೆಗೆ ಸಿದ್ಧವಾಗಿ ನಿಂತಿದೆ. ಈ ನೂರರ ಸಂಭ್ರಮದಲ್ಲಿ ನಿರಂತರದ ಬಗ್ಗೆ ಕೆಲವು ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ಪುಟ್ಟ ಪ್ರಯತ್ನವಿದು.

ನಾವು ಯಾರು?

ನಿರಂತರ ಶುರುವಾದದ್ದು ನಾಲ್ಕು ಜನರಿಂದ ಆದರೂ, ಅಲ್ಲಿಂದ ಇಲ್ಲಿಯವರೆಗೆ ನಿರಂತರದ ಜೊತೆ ಸೇರಿ ನಡೆದವರು ಹಲವಾರು ಜನ ಸನ್ಮಿತ್ರರು. ಇಲ್ಲಿ ಸೇರಿರುವ ಸ್ನೇಹಿತರ ಧ್ಯೇಯ ಒಂದೇ ಆಗಿದ್ದು ಅದೆಂದರೆ ತಮ್ಮ ಕೈಲಾದ ಸಹಾಯವನ್ನು ಸಮಾಜಕ್ಕೆ ಮಾಡುವುದೇ ಆಗಿದ್ದು ಆ ಒಂದು ಗುರಿಗಾಗಿ ತಮ್ಮ ಸಮಯ, ಹಣ, ಜ್ಞಾನ ಎಲ್ಲವನ್ನು ವಿನಿಯೋಗಿಸುತ್ತಾ ಬಂದಿದ್ದಾರೆ. ನಿರಂತರದ ಹಲವು ಸ್ನೇಹಿತರು ಪ್ರತಿ ತಿಂಗಳ ಸಂಬಳದಲ್ಲಿ ಸ್ವಲ್ಪ ಹಣವನ್ನು ನಿರಂತರದ ಚಟುವಟಿಕೆಗಳಿಗೆ ನೀಡುತ್ತಾ ಬಂದಿದ್ದರೆ, ಇನ್ನು ಕೆಲವು ಸ್ನೇಹಿತರು ಯಾವುದಾದರೂ ಕಾರ್ಯಕ್ರಮ ಆಯೋಜನೆಯಾದಾಗ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ಬಂದಿದ್ದಾರೆ. ನಿರಂತರದ ಈ ಎಲ್ಲಾ ಕಾರ್ಯಕ್ರಮಗಳಿಗೆ ನೆರವಾಗಿರುವ ಪ್ರತಿಯೊಬ್ಬ ಸ್ನೇಹಿತರಿಗೂ ಅಂತರಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ.

ನಮ್ಮ ಕಾರ್ಯಕ್ರಮಗಳು:

ನಿರಂತರದ ಹಲವಾರು ಚಟುವಟಿಕೆಗಳನ್ನು ಈ ಕೆಳಗಿನಂತೆ ವಿಂಗಡಿಸಿ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದೇವೆ.

೧. ಅರ್ಪಣ

ಈ ಕಾರ್ಯಕ್ರಮದ ಮೂಲ ಉದ್ದೇಶವೇ ಏನನ್ನಾದರೂ ಅರ್ಪಿಸುವುದು ಆಗಿದೆ. ಈ ಕಾರ್ಯಕ್ರಮದ ಮೂಲ ಉದ್ದೇಶ ನಮ್ಮ ರಾಜ್ಯದ ಸರ್ಕಾರಿ ಶಾಲೆಗಳಿಗೆ ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿದೆ. ಶಾಲೆಗೆ ಕಂಪ್ಯೂಟರ್, ಊಟ ಮಾಡುವ ತಟ್ಟೆಗಳು, ಕುಡಿಯುವ ನೀರಿನ ವ್ಯವಸ್ಥೆ, ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ, ಮಕ್ಕಳಿಗೆ ಬರೆಯುವ ಡೆಸ್ಕುಗಳು, ವಿಜ್ಞಾನದ ಉಪಕರಣಗಳು, ಪ್ರೊಜೆಕ್ಟರ್, ನೀರಿನ ಫಿಲ್ಟರ್, ಮಕ್ಕಳಿಗೆ ಸಮವಸ್ತ್ರಗಳು ಈ ಯೋಜನೆಯ ಮೂಲಕ ನೀಡಿರುವ ಸೌಕರ್ಯಗಳಲ್ಲಿ ಕೆಲವು ಉದಾಹರಣೆಗಳು. ಹಾಗೆ ಹಲವು ಕಂಪನಿಗಳ CSR ಕಾರ್ಯಕ್ರಮಗಳಲ್ಲಿ ನಾವು ತೊಡಗಿಸಿಕೊಂಡಿದ್ದು ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದೇವೆ.

೨. ನನ್ನ ಕನಸು

ಈ ಕಾರ್ಯಕ್ರಮದ ಮೂಲ ಉದ್ದೇಶ ಮಕ್ಕಳಿಗೆ ಕಿರುಚಿತ್ರಗಳ ಮೂಲಕ ಹೊಸ ಆಲೋಚನೆಗಳನ್ನು ಮುಂದಿಡುವುದಾಗಿದೆ. ನಮ್ಮ ಸ್ನೇಹಿತರ ಇನ್ನೊಂದು ತಂಡ ಬೈ೨ಕಾಫಿ ಅವರು ತಯಾರಿಸಿರುವ ಹಲವು ವಿಡಿಯೋಗಳನ್ನು ಮಕ್ಕಳಿಗೆ ತೋರಿಸಿ ಅವುಗಳ ಬಗ್ಗೆ ಮಕ್ಕಳಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿ ಮಕ್ಕಳಿಗೆ ಸಾಮಾಜಿಕ ಅರಿವನ್ನು ಮೂಡಿಸುವ ಪ್ರಯತ್ನವನ್ನು ಈ ಕಾರ್ಯಕ್ರಮದ ಮೂಲಕ ಮಾಡುತ್ತಾ ಬಂದಿದ್ದೇವೆ. ನಾವು ತೋರಿಸುವ ವಿಡಿಯೋಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮ, ಪ್ರಾಣಿಗಳ ಬಗ್ಗೆ ಪ್ರೀತಿ, ಸಂಚಾರಿ ನಿಯಮಗಳ ಪಾಲನೆ, ಭಯವನ್ನು ಎದುರಿಸಿವ ಬಗೆ, ಯೋಗ ಮತ್ತು ಧ್ಯಾನದ ಉಪಯೋಗಗಳು, ಬಾಲ ಕಾರ್ಮಿಕ ಪದ್ಧತಿ, ಶುಚಿತ್ವ, ಪ್ರಜಾಪ್ರಭುತ್ವ ಹೀಗೆ ಹಲವಾರು ವಿಷಯಗಳನ್ನು ಒಳಗೊಂಡಿವೆ. ಈ ಎಲ್ಲಾ ವಿಡಿಯೋಗಳನ್ನು ನಮಗೆ ಕೊಟ್ಟು ನಮ್ಮ ಜೊತೆಯಾಗುತ್ತಿರುವ ಬೈ೨ಕಾಫಿ ತಂಡಕ್ಕೆ ವಿಶೇಷ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.

೩. ವಸ್ತ್ರ

ವಸ್ತ್ರ ಕಾರ್ಯಕ್ರಮವು ನಮ್ಮ ನಡುವೆ ಇರುವ ಜನರು ಬಳಸದೆ ಮತ್ತು ಉತ್ತಮ ಸ್ಥಿತಿಯಲ್ಲಿ ಇರುವ ಅಥವಾ ಹೊಚ್ಚಹೊಸ ಬಟ್ಟೆಗಳನ್ನು ಸಂಗ್ರಹಿಸಿ ಅವನ್ನು ಬೇಕಾದ ಜನರಿಗೆ ತಲುಪಿಸುವ ಉದ್ದೇಶವನ್ನು ಹೊಂದಿದೆ. ಈ ಕಾರ್ಯಕ್ರಮದ ಮೂಲಕ ನಾವು ಹಲವಾರು ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಇರುವ ಜನರಿಗೆ ಒಂದು ಮೂಲಭೂತ ಅಗತ್ಯತೆಯಾದ ಬಟ್ಟೆಗಳನ್ನು ಹಂಚಿ ಅವರಿಗೆ ಸಹಾಯ ಮಾಡುವ ಮೂಲಕ ಸಾರ್ಥಕತೆಯನ್ನು ಪಡೆದಿದ್ದೇವೆ. ನಮ್ಮ ಈ ಕಾರ್ಯಕ್ಕೆ ತಮ್ಮ ಉತ್ತಮವಾದ ಬಟ್ಟೆಗಳನ್ನು ಕೊಟ್ಟು ಸಹಕರಿಸಿದ ಸ್ನೇಹಿತರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ.

೪. ಸಂತರ್ಪಣ

ನಾವು ಮಾಡುವ ಹಲವಾರು ದಾನಗಳಲ್ಲಿ ಅನ್ನದಾನವು ಬಹಳ ಶ್ರೇಷ್ಠವಾದದ್ದು. ಸಂತರ್ಪಣ ಕಾರ್ಯಕ್ರಮದ ಮೂಲಕ ನಾವು ಹಲವಾರು ಕಡೆಗಳಲ್ಲಿ ಊಟದ ವ್ಯವಸ್ಥೆಯನ್ನು ಮಾಡಿದ್ದು, ಅವರೊಂದಿಗೆ ನಾವುಗಳೂ ಕುಳಿತು ಊಟ ಮಾಡಿ ಆ ಕ್ಷಣದ ಆತ್ಮತೃಪಿಗೆ ಭಾಜನರಾಗಿದ್ದೇವೆ. ಹಲವಾರು ಜನ ತಮ್ಮ ಅಥವಾ ತಮ್ಮ ಆತ್ಮೀಯರ ಹುಟ್ಟುಹಬ್ಬದ ದಿನದಂದು ಈ ರೀತಿಯ ಅನ್ನದಾನವನ್ನು ನೆರವೇರಿಸಲು ನಮ್ಮ ಜೊತೆ ಕೈ ಜೋಡಿಸಿದ್ದು, ನಮ್ಮ ಸಂಸ್ಥೆಯ ಮೂಲಕ ಅರ್ಹರಿಗೆ ಒಂದು ಹೊತ್ತಿನ ಊಟದ ವ್ಯವಸ್ಥೆ ಅಥವಾ ಅವರಿಗೆ ಬೇಕಾದ ದಿನಸಿ ಇನ್ನಿತರ ವಸ್ತುಗಳನ್ನು ನೀಡಿ ಸಹಕರಿಸಿದ್ದಾರೆ.

೫. ಸೇವಾರ್ಥ

ನಮಗೆ ತಿಳಿದಿರುವ ಸಂಘ ಸಂಸ್ಥೆಗಳು ಸ್ವಯಂಸೇವಕರಾಗಿ ಬರಲು ನಮ್ಮನ್ನು ಆಹ್ವಾನಿಸಿದಾಗ ನಾವು ಖುಷಿಯಿಂದ ಹಲವಾರು ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿ ಬಂದಿದ್ದೇವೆ. ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರಗಳು ಹೀಗೆ ಹಲವು ಕಾರ್ಯಕ್ರಮಗಳಲ್ಲಿ ನಮ್ಮ ನಿರಂತರದ ಸದಸ್ಯರು ಭಾಗಿಯಾಗಿದ್ದಾರೆ.

೬. ಆಶಯ

ಮಕ್ಕಳ ಭವಿಷ್ಯ ಉತ್ತಮವಾಗಿರಲಿ ಎಂಬ ಆಶಯದಿಂದ, ಮಕ್ಕಳಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನುಒದಗಿಸಲು ನಾವು ಮಾಡುತ್ತಿರುವ ಕಾರ್ಯ ಇದಾಗಿದೆ. ಈ ಕಾರ್ಯದಲ್ಲಿ ಅನಾಥಾಶ್ರಮದ ಮಕ್ಕಳಿಗೆ ಬೇಕಾಗುವ ಹಲವಾರು ಪುಸ್ತಕಗಳು, ನೋಟು ಪುಸ್ತಕಗಳು, ಆಟಿಕೆಗಳು, ಹೊರಾಂಗಣದಲ್ಲಿ ಆಡಲು ಬೇಕಾದ ಸಾಮಗ್ರಿಗಳು ಹೀಗೆ ಹಲವಾರು ವಸ್ತುಗಳನ್ನು ವಿತರಿಸಿದ್ದೇವೆ.

೭. ಜಾಗೃತಿ

ನಮ್ಮ ಸುತ್ತಲಿನ ಜನರಿಗೆ ಹಲವಾರು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಮಾಡುತ್ತಿರುವ ಕಾರ್ಯಕ್ರಮ ಇದಾಗಿದೆ. ಸ್ವಚ್ಛತೆ, ಚುನಾವಣೆ, ಜಲ ಸಂರಕ್ಷಣೆ, ಸಾಕ್ಷರತೆ ಹೀಗೆ ಹಲವಾರು ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ.

೮. ಚಿಗುರು

ಪರಿಸರ ಇದ್ದರಷ್ಟೇ ನಾವು ಎಂದು ಕೇವಲ ಮಾತಿನ ಮೂಲಕ ಹೇಳದೆ, ಹಲವಾರು ಕಡೆಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಕೆಲಸವನ್ನು ನಾವು ಮಾಡುತ್ತಾ ಬಂದಿದ್ದು, ಅದಕ್ಕೆ ಹಲವಾರು ಜನರ ಪ್ರೋತ್ಸಾಹವು ದೊರೆತಿದೆ. ಪರಿಸರ ಸಂರಕ್ಷಣೆಯ ಬಗ್ಗೆ ನಮ್ಮ ಪ್ರತಿ ಕಾರ್ಯಕ್ರಮದಲ್ಲೂ ಮಕ್ಕಳಿಗೆ ತಿಳಿ ಹೇಳುತ್ತಾ ಬಂದಿದ್ದೇವೆ.

೯. ಜೀವಜ್ಯೋತಿ

ಆರೋಗ್ಯವೇ ಭಾಗ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದ್ದರೂ ಹಲವರಿಗೆ ಆರೋಗ್ಯ ಸಮಸ್ಯೆ ಎದುರಾಗಿ ಅದಕ್ಕೆ ಚಿಕಿತ್ಸೆ ಪಡೆಯಲು ಕಷ್ಟಪಡುತ್ತಿರುವ ಹಲವು ಸನ್ನಿವೇಶಗಳಲ್ಲಿ ನಾವು ಅವರಿಗೆ ನಮ್ಮ ಕೈಲಾದ ಸಹಾಯವನ್ನು ಮಾಡಿದ್ದೇವೆ. ಜೊತೆಗೆ ಹಲವಾರು ಜನರನ್ನು ನೇತ್ರದಾನ ಮಾಡಲು ಪ್ರೇರೇಪಿಸಿ ಅವರಿಂದ ನೇತ್ರದಾನ ಮಾಡಲು ಅರ್ಜಿಗಳನ್ನು ತುಂಬಿಸುವ ಕೆಲಸವನ್ನು ಮಾಡಿದ್ದೇವೆ. ಇವುಗಳ ಜೊತೆಗೆ ಅಂಗಾಂಗ ದಾನ ಮಾಡುವ ಕುರಿತು ಅರಿವನ್ನು ಮೂಡಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ.

೧೦. ಶಿಕ್ಷಣ

ಇದು ನಾವು ಎರಡು ವರ್ಷಗಳ ಹಿಂದೆ ಆರಂಭಿಸಿದ ಕಾರ್ಯಕ್ರಮವಾಗಿದ್ದು, ಪ್ರತಿವರ್ಷ ನಾವು ಇಬ್ಬರು ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ವಹಿಸಿಕೊಂಡಿದ್ದು ಅವರ ವಿದ್ಯಾಭ್ಯಾಸ ಮುಗಿಯುವವರೆಗೆ ಅವರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದ್ದೇವೆ.

ಮುಂದಿನ ಯೋಜನೆಗಳು:

ನಾವು ಈಗ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಿಕೊಂಡು ಹೋಗುವುದರ ಜೊತೆಗೆ, ಇನ್ನಷ್ಟು ಹೊಸ ಕಾರ್ಯಕ್ರಮಗಳನ್ನು ಆಯೋಜಿಸುವ ಸಿದ್ಧತೆಯಲ್ಲಿದ್ದೇವೆ. ಶಿಕ್ಷಣದ ಜೊತೆಗೆ ಉದ್ಯೋಗಕ್ಕೆ ನೆರವಾಗುವ ತರಬೇತಿಗಳಿಗೆ ನೆರವಾಗುವ ಕನಸನ್ನು ಹೊತ್ತಿದ್ದೇವೆ. ಸಮಾಜದ ಎಲ್ಲಾ ಸ್ತರಗಳಲ್ಲೂ ಬದಲಾವಣೆ ತರುವ ಕಾರ್ಯಕ್ರಮಗಳನ್ನು ಮಾಡಿ ಇನ್ನಷ್ಟು ಜನರ ಬಾಳಿಗೆ ಹತ್ತಿರವಾಗುವ ಅವರ ಬಾಳಲ್ಲಿ ಒಂದು ಹೊಸ ಬದಲಾವಣೆ ತರುವ ಆಶಯವನ್ನು ಹೊತ್ತು ಮುನ್ನಡೆಯುತ್ತಿದ್ದೇವೆ.

ಹನಿ ಹನಿ ಸೇರಿ ಹಳ್ಳವಾಗುವ ಹಾಗೆ ನಮ್ಮ ಸಣ್ಣ ಪ್ರಯತ್ನಗಳು ಸಮಾಜದಲ್ಲಿ ಬದಲಾವಣೆ ತರುತ್ತವೆ ಎಂದು ಬಲವಾಗಿ ನಂಬಿರುವ ನಮ್ಮ ತಂಡಕ್ಕೆ ನಿಮ್ಮೆಲ್ಲರ ಶುಭ ಹಾರೈಕೆಗಳು ಇರಲಿ ಎಂದು ಕೇಳಿಕೊಳ್ಳುತ್ತ, ಈ ಪುಟ್ಟ ಲೇಖನಕ್ಕೆ ಒಂದು ವಿರಾಮ ಹಾಕುತ್ತಿದ್ದೇವೆ.

ನಮ್ಮನ್ನು ಸಂಪರ್ಕಿಸಲು ಬೇಕಾದ ವಿವರಗಳು

ವೆಬ್ಸೈಟ್ : http://www.nirantarafoundation.org.in/

ಈ-ಮೇಲ್ ಐಡಿ : contactus@nirantarafoundation.org.in

https://www.facebook.com/NirantaraFoundation/

ಫೋನ್ ನಂಬರ್:

ಶಿವು : 9844390983

ಜಗದೀಶ : 7353401318

ಅಶೋಕ: 9900065642